ನರಸಿಂಹರಾಜಪುರ-
	ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಒಂದು ತಾಲ್ಲೂಕು; ಆ ತಾಲ್ಲೂಕಿನ ಆಡಳಿತ ಕೇಂದ್ರ. ಜಿಲ್ಲೆಯ ವಾಯವ್ಯ ಭಾಗದಲ್ಲಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಶಿವಮೊಗ್ಗ ಮತ್ತು ಭದ್ರಾವತಿ ತಾಲ್ಲೂಕುಗಳೂ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಚಿಕ್ಕಮಗಳೂರು, ಶೃಂಗೇರಿ ಮತ್ತು ಕೊಪ್ಪ ತಾಲ್ಲೂಕುಗಳೂ ಇದನ್ನು ಸುತ್ತುವರಿದಿವೆ. ಸಮುದ್ರಮಟ್ಟದಿಂದ ಸರಾಸರಿ ಎತ್ತರ 1,061 ಮೀ. ತಾಲ್ಲೂಕಿನ ವಿಸ್ತೀರ್ಣ 805 ಚ.ಕಿಮೀ. ತಾಲ್ಲೂಕು ಜನಸಂಖ್ಯೆ 65,624 (2001). ತಾಲ್ಲೂಕಿನ ಹೋಬಳಿಗಳು ಬಾಳೆಹೊನ್ನೂರು ಮತ್ತು ನರಸಿಂಹರಾಜಪುರ. ತಾಲ್ಲೂಕಿನಲ್ಲಿ 59 ಗ್ರಾಮಗಳಿವೆ.

	ತಾಲ್ಲೂಕು ಮಲೆನಾಡು ಪ್ರದೇಶ. ಪಶ್ಚಿಮ ಘಟ್ಟದ ಬೆಟ್ಟಗುಡ್ಡಗಳೂ ದಟ್ಟವಾದ ಕಾಡುಗಳೂ ಆವರಿಸಿವೆ. ಅಲ್ಲಲ್ಲಿ ಕಿರಿದಾದ ಬಯಲುಗಳಿವೆ. ಇಲ್ಲಿಯ ಕೆಲವು ಬೆಟ್ಟಗಳು 1,370 ಮೀ.ಗಳಿಗಿಂತಲೂ ಎತ್ತರವಾಗಿವೆ. ತಾಲ್ಲೂಕಿನ ಪಶ್ಚಿಮ ಭಾಗದಲ್ಲಿ ಬೆಟ್ಟಗಳು ಇವೆ. ವಾಯವ್ಯದಲ್ಲಿ ತುಂಗಾ ನದಿ ತಾಲ್ಲೂಕಿನ ಗಡಿಯಾಗಿ ಉತ್ತರಕ್ಕೆ ಹರಿದು ಶಿವಮೊಗ್ಗ ಜಿಲ್ಲೆಯನ್ನು ಪ್ರವೇಶಿಸುತ್ತದೆ. ಬಾಳೆಹೊನ್ನೂರಿನ ಬಳಿ ತಾಲ್ಲೂಕನ್ನು ಪ್ರವೇಶಿಸುವ ಭದ್ರಾ ನದಿ ಉತ್ತರಕ್ಕೆ ಹರಿಯುತ್ತದೆ. ಲಕ್ಕವಳ್ಳಿ ಬಳಿ ಈ ನದಿಗೆ ಅಣೆಯನ್ನು ಹಾಕಿ ಭದ್ರಾ ಜಲಾಶಯವನ್ನು ನಿರ್ಮಿಸಲಾಗಿದೆ. ತಾಲ್ಲೂಕಿನ ಪೂರ್ವಭಾಗದಲ್ಲಿ ಭದ್ರಾ ಜಲಾಶಯದ ಹಿನ್ನೀರು ಹರಡಿದೆ. ತಾಲ್ಲೂಕಿನ ಹೆಚ್ಚು ಪ್ರದೇಶ ಫಲವತ್ತಾದ ಕಪ್ಪು ಮಣ್ಣಿನಿಂದ ಕೂಡಿದ್ದು, ನದೀಬಯಲುಗಳಲ್ಲಿ ಮಾತ್ರ ಸ್ವಲ್ಪ ಮೆಕ್ಕಲುಮಣ್ಣು ಕಂಡುಬರುತ್ತದೆ. ಮಳೆ ಪಶ್ಚಿಮದಲ್ಲಿ ಹೆಚ್ಚು; ಪೂರ್ವಕ್ಕೆ ಹೋದಂತೆ ಕಡಿಮೆಯಾಗುತ್ತದೆ. ಪಶ್ಚಿಮ ಭಾಗ ಬೆಟ್ಟಗುಡ್ಡಗಳಿಂದ ಕೂಡಿ ಅಲ್ಲಿ ಮಳೆ ಹೆಚ್ಚಾಗಿ ಬೀಳುವುದರಿಂದ ದಟ್ಟವಾದ ಕಾಡುಗಳು ಬೆಳೆದಿವೆ. ಇವುಗಳಲ್ಲಿ ಮುಖ್ಯವಾದ್ದು ನರಸಿಂಹಪರ್ವತ ಕಾಡು. ಬಿದಿರು, ನಂದಿ, ನೇರಳೆ, ಶ್ರೀಗಂಧ, ಸಾಗುವನಿ, ಹಲಸು ಮುಂತಾದವು ಈ ಕಾಡಿನ ಮರಗಳು. ಇತ್ತೀಚೆಗೆ ವ್ಯವಸಾಯಕ್ಕಾಗಿ ಕೆಲವೆಡೆ ಕಾಡುಗಳನ್ನು ಸವರುತ್ತಿರುವುದರಿಂದ ಅರಣ್ಯಸಂಪತ್ತು ಕ್ಷೀಣಿಸುತ್ತಿದೆ. ಬತ್ತ, ರಾಗಿ, ಜೋಳ ಇಲ್ಲಿಯ ಮುಖ್ಯ ಆಹಾರಬೆಳೆಗಳು. ಕಾಫಿ, ಏಲಕ್ಕಿ, ಅಡಕೆ, ತೆಂಗು ಮುಖ್ಯವಾದ ತೋಟದ ಬೆಳೆಗಳು. ಬಿದಿರಿನ ಕೆಲಸ, ಕೆಲವೆಡೆ ಜೇನುಸಾಕಣೆ ಉದ್ಯಮ ಇದೆ.

	ಇಲ್ಲಿ ಸಾರಿಗೆ ಸಂಪರ್ಕ ಅಷ್ಟಾಗಿ ಅಭಿವೃದ್ಧಿಯಾಗಿಲ್ಲ. ಶಿವಮೊಗ್ಗ-ನರಸಿಂಹರಾಜಪುರ ರಸ್ತೆ, ಚಿಕ್ಕಮಗಳೂರು-ಮಲ್ಲಂದೂರು-ನರಸಿಂಹರಾಜಪುರ ರಸ್ತೆ ಇವು ಮುಖ್ಯಮಾರ್ಗಗಳು.

	ಬಾಳೆಹೊನ್ನೂರು ಈ ತಾಲ್ಲೂಕಿನ ಒಂದು ಪ್ರಸಿದ್ಧ ಸ್ಥಳ. ಇದರ ಸಮೀಪದ ಬಾಳೆಹಳ್ಳಿಯಲ್ಲಿ ಒಂದು ವೀರಶೈವ ಮಠ ಇದೆ. ಇಲ್ಲಿಯ ವೀರಭದ್ರ ದೇವಾಲಯ ದ್ರಾವಿಡ ಶೈಲಿಯದು. ಖಾಂಡ್ಯ ಗ್ರಾಮದ ಮಾರ್ಕಂಡೇಯ ದೇವಾಲಯ ಪ್ರಸಿದ್ಧವಾದ್ದು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
	ತಾಲ್ಲೂಕಿನ ಆಡಳಿತ ಕೇಂದ್ರ ನರಸಿಂಹರಾಜಪುರ. ಜನಸಂಖ್ಯೆ 7,441 (2001). ಇಲ್ಲೊಂದು ಪುರಸಭೆಯಿದೆ. ಹಿಂದೆ ಈ ಪಟ್ಟಣ ಎಡೆಹಳ್ಳಿ ಎಂದು ಪ್ರಸಿದ್ಧವಾಗಿತ್ತು. 1882ರವರೆಗೆ ಇದು ಲಕ್ಕವಳ್ಳಿ ತಾಲ್ಲೂಕಿನ ಕೇಂದ್ರವಾಗಿತ್ತು. ಅನಂತರ 1897ರವರೆಗೆ ಎಡೆಹಳ್ಳಿ ಉಪತಾಲ್ಲೂಕಿನ ಕೇಂದ್ರವಾಗಿತ್ತು. 1915ರಲ್ಲಿ ಅಂದಿನ ಮೈಸೂರು ಯುವರಾಜ ಕಂಠೀರವ ನರಸಿಂಹರಾಜ ಒಡೆಯರ ಭೇಟಿಯ ನೆನಪಿಗಾಗಿ ಇದರ ಹೆಸರನ್ನು ನರಸಿಂಹರಾಜಪುರ ಎಂದು ಬದಲಾಯಿಸಲಾಯಿತು. ಈ ಊರಿನಲ್ಲಿ ಮೂರು ಜೈನ ಬಸದಿಗಳೂ ಒಂದು ಜೈನ ಮಠವೂ ಇವೆ. ಚಂದ್ರನಾಥ ಬಸದಿಯಲ್ಲಿ ಸುಮಾರು ಮುಕ್ಕಾಲು ಮೀಟರ್ ಎತ್ತರದ ಆಸೀನ ಚಂದ್ರನಾಥನ ಅಮೃತಶಿಲಾವಿಗ್ರಹವಿದೆ. ಸರಸ್ವತಿ, ಗಂಧರಪಾದ ಮತ್ತು ಶ್ರುತ ಇವು ಈ ಬಸದಿಯ ಮುಖ್ಯ ಲೋಹಶಿಲ್ಪಗಳು. ಶಾಂತೇಶ್ವರ ಮತ್ತು ಜ್ವಾಲಾಮಾಲಿನಿಯವು ಇತರ ಎರಡು ಬಸದಿಗಳು. ಇಕ್ಕೇರಿ ನಾಯಕರ ಕಾಲದಲ್ಲಿ ಈ ಊರು ಅಭಿವೃದ್ದಿ ಹೊಂದಿತ್ತು.						
		(ಆರ್.ಸಿ.ಎಚ್.)